ಗಂಗಾನದಿಯ ಮುಖ್ಯ ಉಪನದಿಗಳಲ್ಲೊಂದು. ಟಿಬೆಟ್ನಲ್ಲಿ ಮಾನಸ ಸರೋವರದ ಬಳಿ ರಾಕಸ್ ತಾಲ್ ಎಂಬಲ್ಲಿ (ಉ.ಅ. 30º 40' ಮತ್ತು ಪು.ರೇ. 88º 48') ಹುಟ್ಟಿ ಉತ್ತರ ಪ್ರದೇಶದ ಮೂಲಕ ಹರಿದು, ಬಿಹಾರದಲ್ಲಿ ಛಪ್ರಾ ಬಳಿ ಗಂಗೆಯೊಂದಿಗೆ ಸಂಗಮಿಸುತ್ತದೆ. ಕೈಲಾಸ, ಕಾಮೆಟ್ ಮತ್ತು ಮಾಂಧಾಲ ಶಿಖರಗಳಿಂದಾದ ತ್ರಿಕೋಣದ ನಡುವೆ ಇದರ ಉಗಮ ಸ್ಥಳವಿದೆ. ಪರ್ವತಪ್ರದೇಶದಲ್ಲಿ ಇದಕ್ಕೆ ಕನಿಯಾಲ ಎಂಬ ಹೆಸರಿದೆ. ಕೌರಿಯಾಲ ಎಂಬುದು ಇದರ ನೇಪಾಳಿ ಹೆಸರು. ಹಿಮಾಲಯ ಮತ್ತು ಸಿವಾಲಿಕ್ ಶ್ರೇಣಿಗಳನ್ನು ಭೇದಿಸಿಕೊಂಡು ಆಳವಾದ ಕಣಿವೆಗಳನ್ನು ಕೊರೆದು, ಖೇರಿ ಮತ್ತು ಬಹ್ರಾಯಿಚ್ ಜಿಲ್ಲೆಗಳ ಮೂಲಕ ಮಧ್ಯ ಗಂಗಾ ಬಂiÀÄಲನ್ನು ತಲುಪಿದಾಗ ಇದಕ್ಕೆ ಘಾಘ್ರಾ ಎಂಬ ಹೆಸರು ಪ್ರಾಪ್ತವಾಗುತ್ತದೆ. ಘಾಘ್ರಾ ಎಂಬುದೇ ಹೆಚ್ಚು ಪ್ರಚಾರದಲ್ಲಿರುವ ಹೆಸರು. ಮುಂದೆ ಇದಕ್ಕೆ ದೇವೊಹಾ ಎಂಬ ಹೆಸರೂ ಉಂಟು. ಹಿಮಾಲಯದ ವಿಶಾಲವಾದ ಜಲಾನಯನ ಪ್ರದೇಶದಲ್ಲಿ ಇದು ಹಲವು ಚಿಕ್ಕ, ದೊಡ್ಡ ಉಪನದಿಗಳೊಂದಿಗೆ ಕೂಡಿಕೊಳ್ಳುತ್ತದೆ. ಶಾರ್ದಾ, ಭೇರಿ, ಸರಯೂ, ರಾಪ್ತಿ, ಛೋಟಿ ಗಂಡಕ್ ಇವು ಇದರ ಮುಖ್ಯ ಉಪನದಿಗಳು.

ಘಾಘ್ರಾ ನದಿ ಸ್ಟೀಮರ್ ಸಂಚಾರಕ್ಕೆ ಉಪಯುಕ್ತವಾಗಿದೆ. ಟಾಂಡಾ ಬರಹಜ್, ರಿಬಿಲ್ಗಂಜ್ ಇವು ಈ ನದಿಯ ದಂಡೆಯ ಮೇಲಿರುವ ಪ್ರಮುಖ ವ್ಯಾಪಾರ ಸ್ಥಳಗಳು. ಮಳೆಗಾಲದಲ್ಲಿ ಈ ನದಿ ಮೈದಾನದಲ್ಲಿ ತಂದು ತುಂಬುವ ಮೆಕ್ಕಲು ಮಣ್ಣಿನಿಂದಾಗಿ ಇದರ ನೆರೆನಾಡು ಫಲವತ್ತಾಗಿದೆ.

ಈ ನದಿಯ ಸೇತುವೆಗಳ ಪೈಕಿ ಬರ್ಹಾಮ್ ಘಾಟ್ ಬಳಿಯಲ್ಲೂ (1126 ಮೀ.) ಅಯೋಧ್ಯೆಯ ಬಳಿಯಲ್ಲೂ (1192 ಮೀ.) ಇರುವವು ಪ್ರಮುಖವಾದವು. ಘಾಘ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದಿರುವ ಜಮೀನಿನ ವಿಸ್ತೀರ್ಣ 24,474 ಎಕರೆಗಳು.	(ಆರ್.ಪಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ